ಕಪಿಗಳು : ಸ್ತನಿವರ್ಗದ ಪ್ರೈಮೇಟುಗಳ ಗಣದ ಆಂತ್ರೊಪಾಯ್ಡಿಯ ಉಪಗಣಕ್ಕೆ ಸೇರಿದ ಪ್ರಾಣಿಗಳು (ಮಂಕೀಸ್). ಮನುಷ್ಯ ಮತ್ತು ವಾನರಗಳನ್ನೂ ಒಳಗೊಂಡಿರುವ ಈ ಉಪಗಣದಲ್ಲಿ ಬಾಲವಿರುವ ಪ್ರಾಣಿಗಳನ್ನು ಮಾತ್ರ ಕಪಿಗಳೆನ್ನಬಹುದು. ಮಂಗ, ಕೋಡಗ, ಕೋತಿ ಮುಂತಾದುವು ಇವುಗಳ ಪರ್ಯಾಯ ನಾಮಗಳು;. ಆಂತ್ರೊಪಾಯ್ಡಿಯ ಉಪಗಣದಲ್ಲಿ ಪ್ಲಾಟಿರೈನಿ ಮತ್ತು ಕ್ಯಾಟರೈನಿ ಎಂಬ ಎರಡು ಬುಡಕಟ್ಟುಗಳಿವೆ. ಮೊದಲನೆಯ ಬುಡಕಟ್ಟಿನ ಕಪಿಗಳಿಗೆ ನವಪ್ರಪಂಚದ (ಅಮೆರಿಕ ಮುಂತಾದ ದೇಶಗಳು,) ಕಪಿಗಳೆಂತಲೂ ಎರಡನೆಯ ಬುಡಕಟ್ಟಿನ ಪ್ರಾಣಿಗಳಿಗೆ ಪ್ರಾಚೀನ ಪ್ರಪಂಚದ ಕಪಿಗಳೆಂತಲೂ ಹೆಸರು.

ನವಪ್ರಪಂಚದ ಕಪಿಗಳು ದಕ್ಷಿಣ ಮತ್ತು ಮಧ್ಯ ಅಮೆರಿಕಗಳಲ್ಲಿ ಹೆಚ್ಚಾಗಿ ಕಾಣಬರುತ್ತವೆ. ದಕ್ಷಿಣ ಮೆಕ್ಸಿಕೊವರೆಗೂ ಇವುಗಳ ಪ್ರಸಾರವುಂಟು. ಈ ಬುಡಕಟ್ಟಿನ ಕೋತಿಗಳಲ್ಲಿ ಮೂಗಿನ ಹೊಳ್ಳೆಗಳು, ಮೇಲ್ಮುಖವಾಗಿ ತೆರೆದಿವೆ. ಅವುಗಳ ಮಧ್ಯೆ ಅಗಲವಾದ ಅಸ್ಥಿತಟ್ಟೆಯ ಗೋಡೆಯಿದೆ. ಬಹುಪಾಲು ಕಪಿಗಳಲ್ಲಿ ಬಾಲ ಸುರುಳಿ ಸುತ್ತಿಕೊಳ್ಳುವಂತಿದೆ. ಎದುರು ಬದರಾಗಿಲ್ಲದ ಕಾರಣ ಹೆಬ್ಬೆರಳನ್ನು ಅದೇ ಹಸ್ತದ ಇತರ ಬೆರಳುಗಳಿಗೆ ಮುಟ್ಟಿಸಲು ಸಾಧ್ಯವಿಲ್ಲ. ದವಡೆಯಲ್ಲಿ ಆಹಾರ ಶೇಖರಿಸಬಹುದಾದ ಚೀಲಗಳಿಲ್ಲ. ಕುಂಡೆಗಳ ಮೇಲೆ ರೋಮಗಳಿವೆ. ಕಿವಿಯೊಳಗಿನ ಟಿಂಪ್ಯಾನಿಕ್ ಮೂಳೆ ಸರಳವಾಗಿದೆ. ಅದರಲ್ಲಿ ಯಾವ ಬಗೆಯ ಎಲುಬಿನ ಕೊಳವೆಯೂ ಇಲ್ಲ. ಕೆರೋಟಿಡ್ ರಕ್ತನಾಳ ಪರಯಾಟಿಕ್ ಮೂಳೆಯ ಹಿಂಭಾಗದಲ್ಲಿ ಸಾಗಿ ಮೆದುಳನ್ನು ಸೇರುತ್ತದೆ. ಈ ಕಪಿಗಳಲ್ಲಿ ಮೂರು ಮುಂದವಡೆ ಹಲ್ಲುಗಳಿವೆ, ಈ ಬುಡಕಟ್ಟಿನಲ್ಲಿ ಹಪಾಲಿಡೀ ಅಥವಾ ಕ್ಯಾಲ್ಲಿಥ್ರಿಸಿಡೀ (ಹಪಾಲೆ ಮತ್ತು ಮಾರ್ಮೊಸೆಟ್ ಕಪಿಗಳು) ಮತ್ತು ಸೆಬಿಡೀ (ಕಪುಚಿನ್ ಮತ್ತು ಜೇಡರ ಕೋತಿಗಳು) ಎಂಬ ಎರಡು ಕುಟುಂಬಗಳಿವೆ. ಮೊದಲನೆಯ ಕುಟುಂಬದ ಕೋತಿಗಳಲ್ಲಿ ಮುಂದಿನ ಕಾಲುಗಳು ಹಿಂದಿನವಕ್ಕಿಂತ ಚಿಕ್ಕವು. ಕಿರುಬೆರಳು ಬಿಟ್ಟು ಉಳಿದೆಲ್ಲ ಬೆರಳುಗಳಲ್ಲಿ ಉಗುರುಗಳಿಗೆ ಬದಲಾಗಿ ಪಂಜಗಳಿವೆ. ಕಿವಿಯ ಹಾಲೆ ಕೂದಲಿನಿಂದ ಮುಚ್ಚಿದೆ. ಬಾಲ ಪೊದೆಯಂತಿದೆ; ಸುರಳಿ ಸುತ್ತಲಾರದು. ಹೆಬ್ಬರಳು ಉದ್ದ. ಅದು ಇತರ ಬೆರಳುಗಳಿಗೆ ಅಭಿಮುಖವಾಗಿಲ್ಲ. ಈ ಕಪಿಗಳಿಗೆ ಕೀಟ ಮತ್ತು ಹಣ್ಣುಗಳೇ ಆಹಾರ. ಹೆಣ್ಣು ಸಾಮಾನ್ಯವಾಗಿ ಒಂದು ಸಲಕ್ಕೆ ಎರಡು ಅಥವಾ ಮೂರು ಮರಿಗಳನ್ನು ಹೆರುತ್ತದೆ. ಎರಡನೆಯ ಕುಟುಂಬವಾದ ಸೆಬಿಡೀಗೆ ಸೇರಿದ ಕೋತಿಗಳಲ್ಲಿ ಬಾಲ ಸುರುಳಿ ಸುತ್ತಿಕೊಳ್ಳುವಂತಿದೆ. ಎಲ್ಲ ಬೆರಳುಗಳಲ್ಲೂ ಉಗುರುಗಳಿವೆ. ಹೆಬ್ಬೆರಳು ಇತರ ಬೆರಳುಗಳಿಗೆ ಅಭಿಮುಖವಾಗಿದೆ. ಕಿವಿಯ ಹಾಲೆಯನ್ನು ಕೂದಲು ಆವರಿಸಿಲ್ಲ.

ಪ್ರಾಚೀನ ಪ್ರಪಂಚದ ಕಪಿಗಳಲ್ಲಿ ಮೂಗಿನ ಹೊಳ್ಳೆಗಳು, ಕೆಳಮುಖವಾಗಿವೆ. ಹೊಳ್ಳೆಗಳ ಮಧ್ಯೆ ಕಿರಿದಾದ ಅಸ್ಥಿತಟ್ಟೆಯ ಗೋಡೆಯಿದೆ. ಬಾಲ ಸುರುಳಿ ಸುತ್ತಿಕೊಳ್ಳುವುದೇ ಇಲ್ಲ. ಹೆಬ್ಬೆರಳು ಇತರ ಬೆರಳುಗಳಿಗೆ ಅಭಿಮುಖವಾಗಿದೆ. ವಾನರಗಳನ್ನು (ಏಪ್ಸ್‌) ಬಿಟ್ಟು ಉಳಿದೆಲ್ಲ ಕಪಿಗಳಲ್ಲಿ ದವಡೆ ಚೀಲವಿದೆ. ಅಂತೆಯೇ ವಾನರ ಹಾಗೂ ಲಂಗೂರ್ಗಳನ್ನುಳಿದು ಇತರ ಕಪಿಗಳಲ್ಲಿ ಕುಂಡೆ ರೋಮರಹಿತ. ಕಿವಿಯೊಳಗಿನ ಟಿಂಪ್ಯಾನಿಕ್ ಮೂಳೆಯಲ್ಲಿ ಒಂದು ಎಲುಬಿನ ಕೊಳವೆಯಿದೆ. ಕೆರೋಟಿಡ್ ರಕ್ತನಾಳ ಪರಯಾಟಿಕ್ ಮೂಳೆಯನ್ನು ಕೊರೆದುಕೊಂಡು ಸಾಗಿ ಮೆದುಳನ್ನು ತಲುಪುತ್ತದೆ. ಇವುಗಳಲ್ಲಿ ಮುಂದವಡೆ ಹಲ್ಲುಗಳ ಸಂಖ್ಯೆ ಎರಡು. ಈ ಗುಂಪಿನಲ್ಲಿ ನಾಲ್ಕು ಕುಟುಂಬಗಳಿವೆ. ಅವು : 1 ಸೈನೋಮಾರ್ಫ (ಸರ್ಕೋಪಿಧಿಸಿ) -ಬೆಬೂನ್ ಮತ್ತು ಮ್ಯಾಂಡ್ರಿಲ್ಗಳು. 2 ಸಿಮೈಯಿಡಿ ಅಥವಾ ಪಾಂಗಿಡೀ ಅಥವಾ ಆಂತ್ರೊಪೋಮಾರ್ಫ-ಗೋರಿಲ್ಲ, ಚಿಂಪಾಂಜಿ, ಗಿಬನ್ ಮತ್ತು ಒರಾಂಗೂಟಾನ್. 3 ಕೊಲೊಬಿಡೀ-ನೀಲಗಿರಿಯ ಲಂಗೂರ್ಗಳು ಮತ್ತು 4 ಹೋಮಿನಿಡೀ-ಮಾನವ. ಇವುಗಳ ವಿವರಗಳು ಆಯಾ ಶೀರ್ಷಿಕೆಗಳಲ್ಲಿವೆ (ನೋಡಿ- ಪ್ರೈಮೇಟುಗಳು). 			(ಎಲ್.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ